ಗೋಸಲ ಶ್ರೀ ಚನ್ನಬಸವೇಶ್ವರಸ್ವಾಮಿ ಕ್ಷೇತ್ರವು ಗುಬ್ಬಿಯಲ್ಲಿದೆ. ಇದು ಒಂದು ಪುಣ್ಯಕ್ಷೇತ್ರದ ಜೊತೆಗೆ ಸಾಂಸ್ಕ್ರತಿಕ ಕ್ಷೇತ್ರವಾಗಿದೆ.
ಪುರಾಣಗಳಲ್ಲಿ ಪ್ರಸಿದ್ಧ, ಇತಿಹಾಸದಲ್ಲಿ ದಾಖಲಿತ, ಕಾವ್ಯಗಳಲ್ಲಿ ವರ್ಣಿತ, ವಿದ್ಯೆಯ ತವರು, ಧರ್ಮದ ನೆಲೆಗಟ್ಟು, ಸಂಸ್ಕೃತಿಯಲ್ಲಿ ಮುಂದೆ,ಕರ್ನಾಟಕದ ಬಯಲು ಸೀಮೆಯ ಪ್ರದೇಶ
“ಚಟಕಪುರಿ” ನಂತರದ ಹೆಸರೇ “ಅಮರಗೊಂಡ”. ಇಲ್ಲಿ ಪ್ರಾಚೀನವಾಗಿರುವ ಗದ್ದೆ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಬಸವಪುರಾಣ ಪ್ರವಚನ ಕೇಳಿ ಬದುಕು ಸಾರ್ಥಕ
ಮಾಡಿಕೊಂಡು ಪ್ರವಚನಾಂತ್ಯದಲ್ಲಿ ಪ್ರಾಣ ತ್ಯಜಿಸಿದ ಜೋಡಿ ಗುಬ್ಬಚ್ಚಿಗಳಿಂದ ಗುಬ್ಬಿ ಎಂದು ಹೆಸರು ಪಡೆದಿರುವುದು ಐತಿಹ್ಯ. ದಕ್ಷಿಣದ ಕಾವೇರಿ ಪರಿಸರದಲ್ಲಿ ಗುರು ಗೋಸಲ
ಶ್ರೀ ಚನ್ನಬಸವೇಶ್ವರರು ಧರ್ಮ ಜಾಗೃತಿಗಿಳಿದದ್ದು, ವೀರಶೈವ ಧರ್ಮ ಪುನರುತ್ಥಾನ ಹಾದಿಯಲ್ಲಿ ಮಹತ್ವದ ಮೈಲಿಗಲ್ಲು.
“ಅಪೂರ್ವ ಸಾಧನೆ ಮಾಡಿದ ಮಹಾತ್ಮರ ಕಾರ್ಯಗಳನ್ನು ಮುಂದಿನ ಪೀಳಿಗೆಯ ಜನತೆ ಭಕ್ತಿ ಅಭಿಮಾನ ಕೃತಜ್ಞತೆಗಳಿಂದ ದೈವತ್ವಕ್ಕೇರಿಸಿ ನಿತ್ಯ ಸ್ಮರಣೆಗೆಂದು ದೇವಾಲಯ
ನಿರ್ಮಿಸಿ ಪೂಜೆ ಮಂತ್ರ ಪ್ರಾರ್ಥನೆ ಮೊದಲಾದ ವಿವಿಧ ಉಪಚಾರಗಳಿಂದ ಗೌರವಿಸುವ ಧ್ಯಾನಿಸುವ ಪ್ರಯತ್ನ ನಡೆಸಿದರು.” ಎನ್ನುವ ನಾಗಲೋಟ ಶಾಸನದ ಅಭಿಪ್ರಾಯದಂತೆ
ಗೋಸಲ ಗುರು ಶ್ರೀ ಚನ್ನಬಸವೇಶ್ವರರನ್ನು ಭಕ್ತರು ದೈವತ್ವಕ್ಕೇರಿಸಿ ಪೂಜಿಸಿಕೊಂಡು ಬಂದಿದ್ದಾರೆ. ಕನ್ನಡನಾಡಿನ ದಕ್ಷಿಣದ ತುದಿ ಚಾಮರಾಜನಗರದ ಪಕ್ಕದಲ್ಲಿರುವ ಹರದನಹಳ್ಳಿ.
ಅಲ್ಲಿನ ಗೋಸಲ ಪೀಠದ ಗುರುಗಳಾಗಿದ್ದವರು ಶ್ರೀ ಚನ್ನಬಸವೇಶ್ವರರ. ಆ ಸ್ಥಳದ ಅಧಿ ದೈವ ದಿವ್ಯಲಿಂಗೇಶ್ವರರ ಶಿಶು ಬಾಲಕ ಕುಮಾರರಾಗಿ ಬೆಳೆದವರು.ಸಾಮಾನ್ಯರಾಗಿ ಜನಿಸಿ
ಅಸಾಮಾನ್ಯರಾಗಿ ರೂಪುಗೊಂಡವರು. ಅಸಾಧ್ಯ ಕಾರ್ಯ ಸಾಧನೆ ಮಾಡಿದವರು. ಸ್ಪಷ್ಟ ಕಾಲ ಸ್ಥಳ ಹೆತ್ತವರ ಚಿತ್ರಣ ಎಲ್ಲಿಯೂ ಹೇಳಿಕೊಳ್ಳದೇ.ಆತ್ಮಪ್ರಶಂಸೆಯಿಂದ ದೂರವಿದ್ದವರು.
ಎಡೆಯೂರು ಶ್ರೀ ಸಿದ್ದಲಿಂಗೇಶ್ವರರು ತಮ್ಮ ವಚನದಲ್ಲಿ “ಅನಾದಿ ಗಣೇಶ್ವರನ ಶಿಷ್ಯ ಆದಿ ಗಣೇಶ್ವರ ಹರದನಹಳ್ಳಿಯ ಗೋಸಲದೇವರ ಶಿಷ್ಯೇಯರು ಶಂಕರದೇವರು-ಚನ್ನಬಸವೇಶ್ವರರ
ಕರಕಮಲದಲ್ಲಿ ಉತ್ಪತ್ತಿಯಾದ ಶಿಶು ಸಿದ್ಧಲಿಂಗ ನಾನಯ್ಯಾ” ಎಂದು ಬಣ್ಣಿಸಿರುವುದರಿಂದ ಸಿದ್ದಲಿಂಗೇಶ್ವರರು ಶ್ರೀ ಚನ್ನಬಸವೇಶ್ವರರ ಆಪ್ತ ಶಿಷ್ಯರೆಂಬುದುದನ್ನು ಸ್ಪಷ್ಟಪಡಿಸಬಹುದು
ಮತ್ತು ಗುರು ಶಿಷ್ಯರ ಭಾಂದವ್ಯವನ್ನು ತಿಳಿಯಬಹುದಾಗಿದೆ,
ಹರದನಹಳ್ಳಿಯಲ್ಲಿ ಜನಿಸಿ, ಹಲವು ಧರ್ಮಕಾರ್ಯಗಳನ್ನು ಮಾಡಿ, ಭಕ್ತಜನರನ್ನುದ್ಧರಿಸಿ, ಶಿಷ್ಯರಿಗೆ ಜ್ಞಾನೋಪದೇಶವನ್ನು ಮಾಡಿ, ದೇಶ ಸಂಚಾರ ಮಾಡುತ್ತಾ ಸಿದ್ಧಗಂಗೆಯಲ್ಲಿ ಧ್ಯಾನಸ್ಥರಾಗಿ,
ಗುಬ್ಬಿಯಲ್ಲಿ ನೆಲೆನಿಂತು ಐಕ್ಯಹೊಂದಿದ ಮಹಿಮಾನ್ವಿತರು ಗೋಸಲ ಶ್ರೀ ಚನ್ನಬಸವೇಶ್ವರರು. ಗುಬ್ಬಿಯಲ್ಲಿದ್ದ ಮೊದಲನೇ ಮಲ್ಲಣ್ಣ ಸಿದ್ಧಗಂಗೆಯಿಂದ ಗುಬ್ಬಿಗೆ 72 ಬಿರುದಾವಳಿಗಳಿಂದ ಕರೆತಂದು
ತಾನು ಷಟ್ಸ್ಥಲ ಜ್ಞಾನ ಉಪದೇಶ ಪಡೆದನೆಂದು ಅಭಿಪ್ರಾಯವಿದೆ.
33 ಹಳ್ಳಿ ಆಡಳಿತ ಸೂತ್ರ ಹಿಡಿದಿದ್ದ ಗುಬ್ಬಿ ಹೊಸಹಳ್ಳಿ ಸಂಸ್ಥಾನದ ಅಂದಿನ ಮಹಾನಾಡಪ್ರಭುಗಳು ತಮಗೆ ಆಶೀರ್ವಚನ ಮಾರ್ಗದರ್ಶನ ನೀಡಿದ ಚನ್ನಬಸವೇಶ್ವರರ ಪೂಜಾ ನಿರ್ವಹಣೆಗೆ
ನೆರವಾಗಿದ್ದಾರೆ ಎಂಬುದು ಗೆಜೆಟ್‍ನಲ್ಲಿಯೂ ಉಲ್ಲೇಖವಿದೆ. ಅವರ ವಂಶಸ್ಥರ ಮನೆಯಲ್ಲಿ ಇಂದಿಗೂ ಶ್ರೀಗಳ ಪಾದುಕೆ ಕರಿಬಾನದ ಸಾಲು ವಿಭೂತಿ ಗಟ್ಟಿಮೊದಲಾದ ಪೂಜಾವಸ್ತುಗಳಿದ್ದೂ
ಅಂದಿನಿಂದಲೂ ಪೂಜಿಸಲ್ಪಡುತ್ತಿವೆ.
ಇವರ ಉಗಮ ಅಂತ್ಯ ಮಹಾನದಿಯಂತೆ. ಹಾಗೆ ಶ್ರೀ ಚನ್ನಬಸವೇಶ್ವರರು ಚರಿತ್ರೆಗಿಂತ ಚಾರಿತ್ರ್ಯ ವ್ಯಕ್ತಿಗಿಂತ ಶಕ್ತಿ, ಶಕ್ತಿಗಿಂತ ತತ್ವ, ತತ್ವಕ್ಕಿಂತ ಆದರ್ಶ ಮಾರ್ಗ ತೋರಿದ ಜ್ಞಾನಿಗಳು ಇವರು
ಲಿಂಗೈಕ್ಯರಾಗಿದ್ದು ಹೊನ್ನುಡಿಕೆಯಲ್ಲಾದರೂ ಗುಬ್ಬಿ ಕೆರೆ ಸನಿಹದ ವಿಶಾಲ ಆವರಣದಲ್ಲಿ ಇವರ ಕ್ರಿಯಾಸಮಾಧಿ ಮಾಡಲಾಗಿದೆ. ಆ ಸ್ಥಳದಲ್ಲಿಯೇ ಗದ್ದುಗೆ, ಗರ್ಭಗುಡಿ, ಸುಕನಾಸಿ,
ನವರಂಗ ಮುಖಮಂಟಪ, ಪ್ರದಕ್ಷಿಣಾ ಪಥ, ಧ್ವಜಸ್ತಂಭ, ಬಲಿಪೀಠ, ಎಡೆಮನೆ, ಬಾವಿ ಸುತ್ತಲೂ ಪ್ರಾಕಾರ ಗೋಡೆ, ರಾಜಗೋಪುರ ಉಪ್ಪರಿಗೆ ಮಂಟಪ, ಉತ್ಸವಮೂರ್ತಿ ರಥ,
ಬೆಳ್ಳಿ ಪಲ್ಲಕ್ಕಿ, ಇತರ ವಾಹನಗಳು ಎಲ್ಲವನ್ನೂ ಬಹು ಹಿಂದೆಯೇ ಮಾಡಿದ್ದರು.
ಷಟ್ಸ್ಥಲ ಜ್ಞಾನವನ್ನು ಪೂರ್ಣ ಅರಿತ ಇವರು ಶ್ರೇಷ್ಟ ವಿಚಾರವಾದಿಗಳು. ಬೂದಿ ಮುಚ್ಚಿದ ಕೆಂಡದಂತೆ ಧ್ಯಾನ ಆಸಕ್ತರು. ಶಿವಯೋಗಸಾಧನೆ ಮಾಡಿದ ತಾಣಗಳಲ್ಲೆಲ್ಲ ತೋರುಗದ್ದುಗೆಗಳಾಗಿ ನಿರ್ಮಾಣವಾಗಿವೆ.
ತೆವೆಡೆಹಳ್ಳಿ, ಹೊನ್ನುಡಿಕೆ, ಕೆಂಕೆರೆ, ಚನ್ನಶೆಟ್ಟಿಹಳ್ಳಿ ಮೊದಲಾದೆಡೆ ಜಾಗೃತ ಪುಣ್ಯಕ್ಷೇತ್ರಗಳಾಗಿ ಇಷ್ಟಾರ್ಥ ನೆರವೇರಿಸಿ ನೆಮ್ಮದಿ ಸಾಂತ್ವನ ನೀಡುತ್ತಿವೆ ಹಾಗೂ ಭಕ್ತರಿಂದ ಪೂಜಿಸಲ್ಪಡುತ್ತಿವೆ.
ಗುಬ್ಬಿ ಪಟ್ಟಣದ ಮಧ್ಯಭಾಗದ ಕೋಟೆ ಬೀದಿಯಲ್ಲಿ ಶ್ರೀಗಳು ಧ್ಯಾನ ಮಾಡಿದ ಸ್ಥಳದಲ್ಲಿ ಪ್ರತಿನಿತ್ಯವೂ ಪೂಜೆ, ಅಭಿಷೇಕ ನಡೆಯುತ್ತಿದೆ. ಆದರೆ ವಿಶೇಷ ದಿನಗಳಾದ ಕಾರ್ತಿಕಮಾಸ,ಶ್ರಾವಣಮಾಸ,ಜಾತ್ರೆ,ದೊಡ್ಡ
ಉತ್ಸವ ನಡೆಯುವ ದಿನಗಳಂದು ಹಾಗೂ ಪ್ರತಿ ತಿಂಗಳ ಅಮಾವಾಸ್ಯೆ ದಿನಗಳಂದು ಮಾತ್ರ ದೊಡ್ಡ ದೇವಸ್ಥಾನದಲ್ಲಿ ರುದ್ರಾಭಿಷೇಕ ಸೇವೆ ನಡೆಯುತ್ತದೆ.
ಗುಬ್ಬಿ ಹೊರವಲಯದ ಚನ್ನಶೆಟ್ಟಿಹಳ್ಳಿಯ ಗದ್ದುಗೆಯಲ್ಲಿಯಂತೂ ವಾರ್ಷಿಕ ಜಾತ್ರೆ ಮುಗಿದ ನಂತರದ ಭಾನುವಾರ ಅದ್ದೂರಿ ಉತ್ಸವ ದಾಸೋಹ ವ್ಯವಸ್ಥೆಯಿರುತ್ತದೆ. ಅದನ್ನು ಸವಿಯಲು ದೂರದೂರುಗಳಿಂದ ಭಕ್ತರು
ಆಗಮಿಸುತ್ತಾರೆ. ಗುರುವಿನ ಮೂಲಕ ಶಿವದರ್ಶನ ಪಡೆಯುವುದು ಸಂಪ್ರದಾಯ. ಧೂಪ, ದೀಪ, ಹೂವು, ಗಂಧ, ರುದ್ರಾಕ್ಷಿ, ಭಸ್ಮ, ಮಂತ್ರ, ಪ್ರಸಾದ,ಪಾದೋದಕಗಳ ಮೂಲಕ
ಗುರುದರ್ಶನ ಪಡೆಯುವುದು ಜ್ಞಾನ ಸಂಪಾದನೆಗೆ ದಾರಿಯೆಂದು ನಂಬಿಕೆಯಿದೆ. ತನ್ಮೂಲಕ ಉತ್ಸವ ಪೂಜೆ ಅಭಿಷೇಕ ಪದ್ದತಿಗಳು ಗುರುಲಿಂಗಜಂಗಮರನ್ನು ಗೌರವಿಸುವ ಸಲುವಾಗಿ
ಧ್ಯಾನಕ್ಕೆ ದಾರಿಯಾಗಿವೆ.
ಪ್ರತಿ ಅಮಾವಾಸೆಯಲ್ಲಿ ಜನಜಾತ್ರೆಯೇ ಇರುತ್ತದೆ. ಕಾರ್ತೀಕ ಮಾಸದಂತ್ಯದಲ್ಲಿ ಜೋಡಿ ರಥದಲ್ಲಿ ಅಮರಗೊಂಡ ಪಾರ್ವತಮ್ಮನವರ ಸಹಿತ ಮಲ್ಲಿಕಾರ್ಜುನ ಸ್ವಾಮಿ ಮತ್ತು ಚನ್ನಬಸವೇಶ್ವರರ ಪುಷ್ಪವಾಹನೋತ್ಸವ
ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಇದು ಗುಬ್ಬಿಯಪ್ಪನ ಹೂವಿನ ವಾಹನವೆಂದೇ ಜನಜನಿತ.ಇಡೀ ಪಟ್ಟಣದಲ್ಲಿ ಮೆರವಣಿಗೆ ಇರುತ್ತದೆ. ದಾರಿಯುದ್ದಕ್ಕೂ ತಳಿರು ತೋರಣ, ಫಲಸಹಿತ ಕದಳಿ, ರಂಗೋಲಿ,
ಹೂವಿನ ಅಲಂಕಾರ, ಸಿಹಿ ಹಂಚಿಕೆ, ದೀಪೋತ್ಸವ,ವಿದ್ಯುತ್ ದೀಪಾಲಂಕಾರ, ಜನರ ಹರ್ಷೋತ್ಸಾಹ ಬಣ್ಣಿಸಲಸದಳ. ಶ್ರಾವಣ, ಧನುರ್ಮಾಸ, ಹಬ್ಬಹರಿದಿನಗಳಲ್ಲಿಯಂತೂ ವಿಶೇಷ ಪೂಜಾದಿಗಳು ಇರುತ್ತವೆ.
ಗೋಸಲ ಶ್ರೀ ಚನ್ನಬಸವೇಶ್ವರರು ದೇಶ ಸಂಚಾರ, ಶಿಷ್ಯರಿಗೆ ಮಾರ್ಗದರ್ಶನ, ಸಾಹಿತ್ಯ ರಚನೆ, ಧರ್ಮ ಜಾಗೃತಿ ಜತೆಗೆ ವಿದ್ಯಾದಾನವನ್ನು ಮಠಮಾನ್ಯಗಳ ಮೂಲಕ ಮಾಡಿ ಅಮರರಾಗಿದ್ದಾರೆ.
ಹರದನಹಳ್ಳಿ ಮಠದ ಆವರಣದಲ್ಲಿ ಎಡಗೈಯಲ್ಲಿ ಇಷ್ಟಲಿಂಗವನ್ನು ಹಿಡಿದಿರುವ ಚನ್ನಬಸವೇಶ್ವರರ ಮೂರ್ತಿಯನ್ನು ಕಂಬದ ಮೇಲೆ ಉಬ್ಬುಶಿಲ್ಪವಾಗಿ ಕೆತ್ತಲಾಗಿದೆ. ಇದೇ ರೀತಿ ವಿಗ್ರಹ ಗುಬ್ಬಿಯ ಹಳೆ
ದೇವಸ್ಥಾನದಲ್ಲಿಯೂ ಇತ್ತು. ಸುಣ್ಣ ಬಣ್ಣ ಬಳಿದು ಇತಿಹಾಸದ ಮಹತ್ವ ಅರಿಯದೆ ವಿರೂಪಗೊಂಡಿದೆ. ಪುನರ್ ರಚನೆ ಸಮಯದಲ್ಲಿ ಮರೆಯಾಗಿದೆ. ಉತ್ಸವಮೂರ್ತಿಯ ಪ್ರತಿರೂಪವೇ ಅದಾಗಿದೆ.
ಗುರು ಗೋಸಲ ಶ್ರೀ ಚನ್ನಬಸವೇಶ್ವರರನ್ನು ಕುರಿತು ಕನ್ನಡದ ಅನೇಕ ಕವಿಗಳು ಉಲ್ಲೇಖ ಮಾಡಿರುವುದುಂಟು. ಅವರಲ್ಲಿ ಸಿದ್ದಲಿಂಗೇಶ್ವರರ ವಚನಗಳು, ಶಾಂತೇಶ ಕವಿಯ ಸಿದ್ದೇಶ್ವರ ಪುರಾಣದ ಗುರುಪರಂಪರೆ,
ಸುವ್ವಿಮಲ್ಲನ ಸಾಂಗತ್ಯ, ಚನ್ನವೀರಜಂಗಮನ ಷಟ್ಸ್ಥಲವಲ್ಲಭ, ಗರಣಿಯ ಬಸವಲಿಂಗನ ಸಿದ್ದೇಶ್ವರ ಮಹಿಮಾ ತಾರಾವಳಿ, ವಿರಕ್ತ ತೋಂಟದಾರ್ಯನ ಸಿದ್ದೇಶ್ವರ ಪುರಾಣ, ಫ.ಗು.ಹಳಕಟ್ಟಿ ಸಂಪಾದಿಸಿರುವ
ಅಜ್ಞಾತ ಕವಿಯ ನಿರಂಜನ ವಂಶ ರತ್ನಾಕರ, ವಿರೂಪಾಕ್ಷಪಂಡಿತನ ಚನ್ನಬಸವಪುರಾಣ, ಹೇರಂಬ ಕವಿಯ ಸಿದ್ಧಲಿಂಗೇಶ್ವರ ಸಾಂಗತ್ಯ ಮೊದಲಾದ ಕೃತಿಗಳಲ್ಲಿ ಗಮನಿಸಬಹುದು.
ನಂಬಿದವರ ಸಕಲ ಇಷ್ಟಾರ್ಥ ಸಿದ್ದಿಸುವ ಮಹಾಮಹಿಮರಿವರು. ಕಷ್ಟ, ನಷ್ಟ, ರೋಗರುಜಿನ ಪರಿಹಾರ, ವಧುವರಾನ್ವೇಷಣೆ, ಸಂತಾನ ಪ್ರಾಪ್ತಿ, ಶಾಂತಿ ನೆಮ್ಮದಿ, ಉದ್ಯೋಗ, ವಿದ್ಯಾಭ್ಯಾಸ ಪ್ರಗತಿಗೆ
ಶ್ರೀ ಕ್ಷೇತ್ರವನ್ನು ದರ್ಶಿಸಿ ಪೂಜಿಸಿ ಪುನೀತರಾಗುವ ಪರಿಯನ್ನು ನೋಡಲು ಕಣ್ಣುಗಳೆರಡು ಸಾಲದು. ಗುರು ಗೋಸಲ ಶ್ರೀ ಚನ್ನಬಸವೇಶ್ವರರ ಹೆಸರು ಅಂಗಡಿ ಮುಂಗಟ್ಟು ಹೋಟೆಲ್ ಚಿತ್ರಮಂದಿರ ವ್ಯಕ್ತಿ
ಸಂಘ ಸಂಸ್ಥೆ ಉದ್ಯಮ ವ್ಯವಹಾರ ಎಲ್ಲೆಡೆ ರಾರಾಜಿಸುತ್ತದೆ. ಅಗ್ರ ಪೂಜೆ ಸಲ್ಲುತ್ತದೆ.
ಮಹಾ ರಥೋತ್ಸವ ದಿನದಂದು ಹೊಸಹಳ್ಳಿ ಅಂಬಲಿ ವಂಶಸ್ಥರು ಶ್ರೀ ಚನ್ನಬಸವೇಶ್ವರರ ಪ್ರೀತ್ಯರ್ಥ ರಾಗಿಯಿಂದ ಅಂಬಲಿ ತಯಾರಿಸಿ ನೈವೇದ್ಯ ಮಾಡಿ ಪೂಜಿಸುವ ಪದ್ಧತಿ ಅನೂಚಾನವಾಗಿ ನಡೆದುಬಂದಿದೆ.
ಚಿಕ್ಕೋನಹಳ್ಳಿ ಮಾದಾರ ಹರಳಯ್ಯನ ವಂಶಸ್ಥರು ಜಾತ್ರಾ ಸಮಯದಲ್ಲಿ ಕ್ಷೇತ್ರದಲ್ಲಿರುವ ಹಿಂದಿನ ಪಾದುಕೆಗಳನ್ನು ನೀರಲ್ಲಿ ಬಿಡುವರು. ಮನೆ ಬಿಟ್ಟು ಊರಾಚೆ ಗುಡಿಸಿಲಿನಲ್ಲಿ ನಡೆಮಡಿಯಿಂದ ಇದ್ದು ಕಾಡಿಗೆ ಹೋಗಿ
ಪ್ರಾಣಿ ಮುಟ್ಟಿದ ಗೋವಿನ ಚರ್ಮವನ್ನು ತಂದು ಹದಗೊಳಿಸಿ ಪಾದುಕೆ ತಯಾರಿಸಿ ಪೂಜಿಸುವರು. ಹೊಸ ಬುಟ್ಟಿಯಲ್ಲಿ ಅಲಂಕರಿಸಿಕೊಂಡು ಸುತ್ತಮುತ್ತಲ ಊರುಗಳ ಮನೆಗಳಿಗೆ ಕೊಂಡೊಯ್ಯುವರು.
ಎಲ್ಲರಿಂದ ಪೂಜೆಗೊಂಡ ಮೇಲೆ ರಥೋತ್ಸವದ ದಿನದಂದು ಕ್ಷೇತ್ರದಲ್ಲಿ ಇರಿಸುವರು. ಅದು ಮುಂದಿನ ವರ್ಷದ ತನಕ ಪೂಜಿಸಲ್ಪಡುತ್ತದೆ. ಶ್ರೀ ಚನ್ನಬಸವೇಶ್ವರರೇ ವರ್ಷಕ್ಕೊಮ್ಮೆ ಮನೆಗಳಿಗೆ ಬಂದು ಭಕ್ತಜನರನ್ನು
ಆಶೀರ್ವದಿಸುವರು ಎಂದು ನಂಬುಗೆಯಿದೆ.
ನಿತ್ಯ ಪೂಜೆ ಅಲಂಕಾರ ಅಭಿಷೇಕ ಪ್ರಸಾದ ಪ್ರತಿ ಅಮಾವಾಸ್ಯೆ ಹಬ್ಬ ಹರಿದಿನಗಳಂದು ವಿಶೇಷ ಕಾರ್ಯಕ್ರಮಗಳಿರುತ್ತವೆ. ವಾರ್ಷಿಕ ಜಾತ್ರೆ (ಸುಮಾರು ಹದಿನೈದು ದಿನಗಳ ಕಾಲ) ಪಾಲ್ಗುಣ ಶುದ್ಧ ಷಷ್ಟಿಯಂದು ಧ್ವಜಾರೋಹಣ,
ದಶಮಿಯಂದು ಮಹಾರಥೋತ್ಸವ ನಡುವೆ ಸೇವಾಕರ್ತರಿಂದ ನವರಂಗ ಪಲ್ಲಕ್ಕಿ ಉಪ್ಪರಿಗೆ ಸೇವೆ ತೊರೆ ಮಠದ ರುದ್ರಾಕ್ಷಿ ಮಂಟಪ ಗುಬ್ಬಿ ವೀರಣ್ಣ ಕುಟುಂಬದ ವಿಚಿತ್ರ ಮಂಟಪ ಬಸವ ವಾಹನ ಬಿಳಿಕುದುರೆ ಕೆಂಪು ಕುದುರೆ,ನವಿಲು,
ಹುಲಿ,ನಂದಿ,ಆನೆ ಉತ್ಸವಗಳು ಹುಣ್ಣಿಮೆ ದಿನ ಪೂಜ್ಯ ಶ್ರಿ ಅಟವಿ ಸ್ವಾಮಿಗಳ ಬೆಳ್ಳಿಪಲ್ಲಕ್ಕಿ ಅಂತ್ಯದಲ್ಲಿ ತೊರೆಮಠದ ಆವರಣದಲ್ಲಿ ಫೌಜುದಾರ್ ಬೋರೇಗೌಡರ ವಂಶಸ್ಥರಿಂದ ತೆಪ್ಪೋತ್ಸವ ವಿಜೃಂಭಣೆಯಿಂದ ನಡೆಯುತ್ತವೆ.
ಭಕ್ತ ಮಹನೀಯರು ಕಲಾಭಿಮಾನಿಗಳು ಸಾಂಸ್ಕøತಿಕ ಕಾರ್ಯಕ್ರಮದ ಪ್ರಯುಕ್ತ ಪೌರಾಣಿಕ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಟನ್ ಗಟ್ಟಲೆ ಬೂಂದಿ ಮಿಠಾಯಿ ಸಿಹಿಯ ಜತೆಗೆ ನಿರಂತರ ವಿಶೇಷ ದಾಸೋಹ ಪಾನಕ ಫಲಾಹಾರ
ವಿತರಣೆ ನಮ್ಮ ಸುತ್ತಮುತ್ತಲ ಜಾತ್ರೆಗಳಿಗಿಂತ ಬಲು ವಿಭಿನ್ನ ಹಾಗೂ ಪ್ರಸಿದ್ಧ.
ಗಣ್ಯ ಮಾನ್ಯರು, ಜನಪ್ರತಿನಿಧಿಗಳು, ಪೇಟೆ ಮಠಸ್ಥರು, ದೇಶದ ಶೆಟ್ಟರು, ಯಜಮಾನರು, 18 ಕೋಮಿನ ಭಕ್ತರು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಆಗಮಿಸಿ ತಮ್ಮ ಕಾರ್ಯನಿರ್ವಹಿಸುತ್ತಾರೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರು, ತುಮಕೂರು ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು (ಆಡಳಿತಾಧಿಕಾರಿ), ತಹಶೀಲ್ದಾರ್/ಕಾರ್ಯನಿರ್ವಹಣಾಧಿಕಾರಿಗಳು ಪೇಷ್ಕಾರ್(ಕಂದಾಯ ತನಿಖಾಧಿಕಾರಿ)
ಮತ್ತು ಕ್ಷೇತ್ರದ ಕಛೇರಿ ಸಿಬ್ಬಂದಿ, ಅರ್ಚಕರು ಆಗಮಿಕರು ಪರಿಚಾರಕರು ಸಹಾಯಕರು ಇವರೆಲ್ಲರ ವ್ಯವಸ್ಥೆಯಿದೆ
ಕರ್ನಾಟಕ ಸರ್ಕಾರ ರಚನೆ ಮಾಡಿರುವ ವ್ಯವಸ್ಥಾಪನಾ ಸಮಿತಿ, ಗುಬ್ಬಿ ಗೋಸಲ ಶ್ರೀ ಚನ್ನಬಸವೇಶ್ವರ ಜೀರ್ಣೋದ್ಧಾರ ಸೊಸೈಟಿ (ರಿ) ಮತ್ತು ದಾಸೋಹ ಸಮಿತಿ, ಈ ಎಲ್ಲಾ ಸಮಿತಿಯ ಪದಾಧಿಕಾರಿಗಳು ಸಮರ್ಥವಾಗಿ
ಕಾರ್ಯನಿರ್ವಹಣೆ ಮಾಡುತ್ತಿದ್ದು ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ.
ಶ್ರೀಕ್ಷೇತ್ರದ ಗದ್ದುಗೆ ಐದಾರು ಶತಮಾನಗಳ ಹಿಂದೆ ನಿರ್ಮಿತವಾಗಿದ್ದು ಶಿಥಿಲವಾಗಿದ್ದ ಕಾರಣ 2002 ರಲ್ಲಿ ಗುಬ್ಬಿ ಶ್ರೀ ಚನ್ನಬಸವೇಶ್ವರಸ್ವಾಮಿ ದೇವಸ್ಥಾನ ಜೀರ್ಣೋದ್ಧಾರ ಸೊಸೈಟಿ(ರಿ). ರಚಿಸಿ ಪುನರ್ ನಿರ್ಮಾಣ ಕಾರ್ಯ ಆರಂಭಿಸಲಾಯಿತು.
ಸಿದ್ದಗಂಗಾ ಮಠಾಧ್ಯಕ್ಷರಾದ ಪರಮ ಪೂಜ್ಯ ಡಾ.ಶ್ರೀ.ಶ್ರೀ.ಶ್ರೀ.ಶಿವಕುಮಾರ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ಮಾರ್ಗದರ್ಶನಗಳಿಂದ,ಭಕ್ತಾಧಿಗಳ ದಾನದಿಂದ ತಮಿಳುನಾಡಿನ ನುರಿತ ಶಿಲ್ಪಿಗಳಿಂದ 2012 ರಲ್ಲಿ ಪೂರ್ಣಗೊಂಡು ಉದ್ಘಾಟನೆಯಾಯಿತು.
ಸುಂದರವಾದ ಹಳೆಯ ರಾಜಗೋಪುರವನ್ನೊಳಗೊಂಡ ಅಂದವಾದ ಪ್ರಾಕಾರ, ಮೇಲೆ ಶಿವಶರಣರ ಮೂರ್ತಿಗಳು, ವಿಮಾನ ಗೋಪುರ ಸಹಿತ ಗೋಸಲ ಶ್ರೀ ಚನ್ನಬಸವೇಶ್ವರರು ಹಾಗೂ ಶ್ರೀ ಅನುಬಸವೇಶ್ವರರ ದ್ವಿಕೂಟ ಗರ್ಭಗುಡಿಗಳು, ಸುಕನಾಸಿ,
ನವರಂಗ(ಸಭಾಮಂಟಪ), ಬಲಿಪೀಠ, ನಂದಿಮಂಟಪ, ದಾಸೋಹ ಭವನ ಪೂರ್ಣಗೊಂಡಿದೆ.
135 ಅಡಿ ಎತ್ತರದ ಹೊಸ ರಾಜಗೋಪುರ ನಿರ್ಮಾಣದ ಹಂತದಲ್ಲಿದೆ. ಲಕ್ಷಾಂತರ ವೆಚ್ಚದಲ್ಲಿ ಭಕ್ತಾದಿಗಳ ಕಾಣಿಕೆಯಿಂದ ಪ್ರಾಕಾರೋತ್ಸವಕ್ಕೆ ಬೆಳ್ಳಿ ರಥ ರೂಪುಗೊಳ್ಳುತ್ತಿದೆ. ಎದುರಿನಲ್ಲಿ ಉಪ್ಪರಿಗೆ ಗೋಪುರವಿದೆ. ಎದುರಿನ ರಾಷ್ಟ್ರೀಯ ಹೆದ್ದಾರಿಯಲ್ಲಿ
ತೊರೆಹಳ್ಳಿ ರಂಗಪ್ಪಗೌಡರ ಕುಟುಂಬದಿಂದ ನಿರ್ಮಿಸಲ್ಪಟ್ಟ ಮಹಾದ್ವಾರವಿದೆ. ಸುತ್ತಲೂ ರಕ್ಷಣಾಗೋಡೆ ನಿರ್ಮಾಣವಾಗುತ್ತಿದೆ. ರಥ ನಿಲುಗಡೆ ಕೊಠಡಿ ನಿರ್ಮಾಣವಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಯಾತ್ರಿ ನಿವಾಸ ಕಾಮಗಾರಿ ನಡೆಯುತ್ತಿದೆ.
ದಾಸೋಹ ಸಮಿತಿಯಿಂದ ಭಕ್ತಾದಿಗಳಿಗೆ ಮಧ್ಯಾಹ್ನ ವೇಳೆ ದಾಸೋಹ ವ್ಯವಸ್ಥೆಯಿದೆ. ನಿತ್ಯಕರ್ಮವಿಧಿಗಳಿಗೆ ಶೌಚಾಲಯಗಳಿವೆ. ಕ್ಷೇತ್ರದ ವಿಶಾಲ ಆವರಣವನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. “ಎ” ಶ್ರೇಣಿ ಕ್ಷೇತ್ರವೆಂದು ಪರಿಗಣಿತವಾಗಿದೆ. ಗುಬ್ಬಿ ಪ್ರದೇಶದ ಎಲ್ಲಾ ರೀತಿಯ ಮದುವೆ ನಾಮಕರಣ ಗೃಹ ಪ್ರವೇಶ ಆಸ್ತಿ ಪಾಸ್ತಿ ಸುಗ್ಗಿ ಹೊಸಬೆಳೆ ಉದ್ಯೋಗ ವಿದ್ಯಾಭ್ಯಾಸ
ಎಲ್ಲ ವಿಷಯಗಳಲ್ಲಯೂ ಅಗ್ರ ಪೂಜೆ, ಸರ್ಕಾರಿ ಸರ್ಕಾರೇತರ ಕಾರ್ಯಕ್ರಮಗಳೆಲ್ಲ ಶ್ರೀಗಳ ಕ್ಷೇತ್ರ ಸನ್ನಿಧಿಯಿಂದಲೇ ಶುಭಾರಂಭಗೊಳ್ಳುವುದು ಬಹುಹಿಂದಿನಿಂದಲೂ ನಡೆದು ಬಂದಿದೆ. ಭಕ್ತರು ಹರಕೆ ಹೊತ್ತು ಮನವಿ ಅರ್ಪಿಸಿ ತಮ್ಮ ಇಷ್ಟಾರ್ಥ ನೆರವೆರಿಸಿಕೊಳ್ಳುವುದು
ಸಹಜ ಪ್ರಕ್ರಿಯೆಯಾಗಿದೆ. ಅದರಿಂದ ಯಶಸ್ಸು ಸಾಧನೆಯಾಗಿದೆ. ಮಹಿಮಾನ್ವಿತ ಜಾಗೃತಸ್ಥಾನವಾಗಿ ದೇವಾಲಯವೆಂದೇ ಲೋಕಪ್ರಸಿದ್ಧಿಯಾಗಿದೆ.
ಇಲ್ಲಿ ಸದ್ದುಗದ್ದಲವಿಲ್ಲ. ಯಾವುದೇ ಜಾತಿ, ಮತ, ಧರ್ಮ, ಲಿಂಗ, ಗಡಿ, ನುಡಿ, ಮತ್ತಿತರ ಬೇಧಭಾವಗಳಿಲ್ಲದೆ ತಾರತಮ್ಯವಿಲ್ಲದೆ ಪ್ರವೇಶಾವಕಾಶವಿದೆ. ಬೆಳಗಿನಿಂದ ಬೈಗಿನವರೆಗೆ ಸಮಯದ ನಿರ್ಬಂಧಗಳಿಲ್ಲದೆ ದರ್ಶನ ಹಾಗೂ ಅರ್ಚನೆಗೆ ಸೌಲಭ್ಯವಿದೆ.
ಒಮ್ಮೆ ಕ್ಷೇತ್ರಕ್ಕೆ ಬಂದು ದರ್ಶಿಸಿ ಪೂಜಿಸಿದ ಭಕ್ತರು ಮರೆಯಲಾಗದ ಅನಿರ್ವಚನೀಯ ಅನುಭವವಾಗಿದೆಯೆಂದು ಹೇಳುವುದನ್ನು ಗಮನಿಸಬಹುದಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿಯೇ ಯಾವ ಧಾರ್ಮಿಕ ಕ್ಷೇತ್ರದ ಪೂಜಾ ಸ್ಥಳದಲ್ಲಿ ಇಲ್ಲದ ಫಲ
ಪುಷ್ಪ ರುದಾಕ್ಷಿ ನಾಣ್ಯ ಮೊದಲಾದ ಅಲಂಕಾರಗಳಿಂದ ಪ್ರಸಿದ್ಧವಾಗಿದೆ. ಜನಮನ ಗೆದ್ದಿದೆ. ಆನಂದದಾಯಕವಾಗಿದೆ. ನೆಮ್ಮದಿ ನೀಡುತ್ತಿದೆ.
ಗುಬ್ಬಿಹೊಸಹಳ್ಳಿ ಸಂಸ್ಥಾನದ ರಾಜಗುರುಗಳೆಂದೇ ಪೂಜಿಸಿದ್ದ ಮಹಾನಾಡ ಪ್ರಭುಗಳು, ಶ್ರೀಗಳ ಭಕ್ತರಾಗಿದ್ದು ಕ್ಷೇತ್ರದ ಪ್ರಾಕಾರ ಅಭಿವೃದ್ದಿಗೆ ಆಸರೆಯಾದ ಸಮರ್ಥ ಆಡಳಿತಗಾರ ಫೌಜುದಾರ್ ಬೋರೆಗೌಡರು, ಗುಬ್ಬಿ ಗೋಸಲ ಚನ್ನಬಸವೇಶ್ವರರ ಮಹತ್ವವನ್ನು
ಅರಿತು ಉತ್ತರ ಕರ್ನಾಟಕದಿಂದ ಬಂದ ಅಟವಿ ಸ್ವಾಮಿಗಳು ತೊರೆಮಠದಲ್ಲಿದ್ದುಕೊಂಡು 1896 ರಲ್ಲಿ ಶ್ರೀ ಚನ್ನಬಸವೇಶ್ವರರ ದೇವಾಲಯದ ಆವರಣದಲ್ಲಿ ಪಾಪನಾಶಿನಿ ನಿರ್ಮಿಸಿ ಸುತ್ತಲೂ 63 ಪುರಾತನರ ಹೆಸರಲ್ಲಿ ಲಿಂಗಗಳನ್ನು ¸ ಸ್ಥಾಪಿಸಿ ಪ್ರತಿಷ್ಟಾಪಿಸಿ ನಂತರ 1905 ರಲ್ಲಿ
ಶ್ರೀ ಸ್ವಾಮಿಯವರ ಉತ್ಸವಕ್ಕೆ ಅಗತ್ಯವಾದ ಬೆಳ್ಳಿಪಲ್ಲಕ್ಕಿಯನ್ನು ನಿರ್ಮಿಸಿಕೊಟ್ಟು ಐತಿಹಾಸಿಕ ಕೊಡುಗೆ ನೀಡಿದ ಧಾರ್ಮಿಕ ಸಂತ ಶ್ರೀ ಅಟವಿ ಸ್ವಾಮಿಗಳು
ಶ್ರೀ ಚನ್ನಬಸವೇಶ್ವರರ ಗದ್ದುಗೆ ಮುಂಭಾಗದ ಬಾಗಿಲುವಾಡಕ್ಕೆ ಬೆಳ್ಳಿಹೊದಿಕೆಯನ್ನು ನೀಡಿದ ನಾಟಕರತ್ನ ಡಾ// ಗುಬ್ಬಿ ವೀರಣ್ಣನವರು ಲೋಕಪ್ರಸಿದ್ಧರಾಗಲು ಹಾಗೂ ತಮ್ಮ ಯಶಸ್ಸಿಗೆ ಶ್ರೀ ಚನ್ನಬಸವೇಶ್ವರರ ಆಶೀರ್ವಾದವೇ ಕಾರಣವೆಂಬುದು ಸ್ಥಳೀಯರ ಜನಜನಿತ ಅಭಿಪ್ರಾಯವಾಗಿದೆ.
ಮಹಾಶಿವಯೋಗಿ ಗುಬ್ಬಿ ಗೋಸಲ ಶ್ರೀ ಚನ್ನಬಸವೇಶ್ವರರ ಶಿವಯೋಗ ಧ್ಯಾನಶಕ್ತಿಯೇ ನಮ್ಮೆಲ್ಲರಿಗೂ ಸಂತೋಷ ನೆಮ್ಮದಿ ಶಾಂತಿ ನೀಡಿ ರಕ್ಷಿಸುತ್ತಿದೆ. ಲೋಕ ಮಾನ್ಯ ಆ ಮಹಾಮಹಿಮಾನ್ವಿತರಿಗೆ ಸಾಷ್ಟಾಂಗ ನಮಸ್ಕಾರಗಳು. ಗುಬ್ಬಿಹೊಸಹಳ್ಳಿ ಮಹಾನಾಡ ಪ್ರಭುಗಳಿಂದ ನೆರವು
ಪಡೆದು ಸಂಸ್ಥಾನವು ಜನಹಿತ ಸಾಧಿಸಲು ಮಾರ್ಗದರ್ಶನ ನೀಡಿದವರು. ಶ್ರೀಯುತರು ನಮ್ಮಿಂದ ಭೌತಿಕವಾಗಿ ದೂರವಾದರೂ ಸುಮಾರು ಐದು ಶತಮಾನಗಳಿಂದ ಶಿವಯೋಗದಲ್ಲಿ ನಿರತರಾಗಿದ್ದಾರೆ. ಭಗವದಂಶ ಸಂಭೂತರಾಗಿದ್ದಾರೆ. ನಮ್ಮೊಂದಿಗೆ ಇದ್ದಾರೆ. ದಾರಿ ತೋರುತ್ತಾರೆ.
ಮುನ್ನಡೆಸುತ್ತಾರೆ. ಕಷ್ಟ ಕಾರ್ಪಣ್ಯ ಕಳೆದು ಸುಖ ಸಂತೋಷ ನೆಮ್ಮದಿ ನೀಡುವರೆಂಬ ನಂಬುಗೆ ಭಕ್ತ ಜನರಲ್ಲಿದೆ.