ಪ್ರತಿ ವರ್ಷ ಜನವರಿ 14 ಅಥವಾ 15 ರಂದು ಬರುವ ಸಂಕ್ರಾಂತಿ ಹಬ್ಬಕ್ಕೆ ಇಲ್ಲಿ ಪಲ್ಲಕ್ಕಿ ಉತ್ಸವ ನಡೆಯುತ್ತದೆ. ಬೆಳಿಗ್ಗೆಯಿಂದ ಎಲ್ಲ ದೈನಂದಿಕ ಪೂಜೆಗಳನ್ನು ಮುಗಿಸಿ ನಂತರ ಚಿಕ್ಕ ದೇವಸ್ಥಾನದಲ್ಲಿ ಇರುವ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು(ಶ್ರೀ ಬಸವೇಶ್ವರರನ್ನು, ಶ್ರೀ ಮಲ್ಲಿಕಾರ್ಜುನಸ್ವಾಮಿ ಮತ್ತು ಭ್ರಮರಾಂಭ ದೇವಿ) ಚಿಕ್ಕ ದೇವಸ್ಥಾನದಿಂದ ಮೆರವಣಿಗೆಯಲ್ಲಿ ವಾದ್ಯ, ಪಟಾಕಿ ಸದ್ದುಗಳೊಂದಿಗೆ ರಾಜಬೀದಿಯಲ್ಲಿ ದೊಡ್ಡ ದೇವಸ್ಥಾನಕ್ಕೆ ತಂದು, ಅಲ್ಲಿ ಆ ಉತ್ಸವ ಮೂರ್ತಿಗಳಿಗೆ ರುದ್ರಾಭಿಷೇಕ ಮತ್ತು ಪೂಜೆ, ಮಹಾಮಂಗಳಾರತಿ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಸಂಜೆ ಮತ್ತೆ 6.00 ಗಂಟೆಗೆ ಆ ಮೂರ್ತಿಗಳನ್ನು ಪಲ್ಲಕ್ಕಿಯಲ್ಲಿಟ್ಟು ಅದೇ ರಾಜಬೀದಿಗಳಲ್ಲಿ ಅದ್ದೂರಿಯ ಮೆರವಣಿಗೆಯೊಂದಿಗೆ ಚಿಕ್ಕ ದೇವಸ್ಥಾನದಲ್ಲಿ ಕೂರಿಸಿ, ರಾಜೋಪಚಾರ ಅಭಿಷೇಕ, ಪೂಜೆ ಮಾಡಿ ಆ ದಿನದ ಕಾರ್ಯಗಳನ್ನು 10.00 ಗಂಟೆಗೆ ಸುಮಾರಿಗೆ ಮುಗಿಸುತ್ತಾರೆ.

ವರ್ಷದ ಹಬ್ಬಗಳು
ಜನವರಿ ಸಂಕ್ರಾಂತಿ:
ಮಾರ್ಚ್ ತಿಂಗಳಲ್ಲಿ
ಶಿವರಾತ್ರಿಯಾದ 7 ದಿನಗಳ ನಂತರ ಇಲ್ಲಿ ಜಾತ್ರೆ ನಡೆಯುತ್ತದೆ. ಇದು ಈ ದೇವಸ್ಥಾನದ ಅದ್ಧೂರಿ ಹಬ್ಬಗಳಲ್ಲೊಂದಾಗಿದೆ. ಇದು ಸರಿ ಸುಮಾರು 15ರಿಂದ 20 ದಿನಗಳವರೆಗೆ ನಡೆಯುತ್ತದೆ.
ಮೊದಲನೇ ದಿನ ಧ್ವಜಾರೋಹಣ, ಆ ದಿನ ಬೆಳಿಗ್ಗೆಯಿಂದ ಎಲ್ಲಾ ವಿಧಿ ವಿಧಾನಗಳನ್ನು ಮುಗಿಸಿ ಸಂಜೆ 6 ಗಂಟೆಗೆ ಸರಿಯಾಗಿ ಜಾತ್ರೆಗೆ ಚಾಲನೆ ಕೊಡುವ ಮುನ್ಸೂಚನೆಯಾಗಿ ಇಲ್ಲಿ ಧ್ವಜಾರೋಹಣ ನಡೆಯುತ್ತದೆ. ರಾತ್ರಿ 11.00 ಗಂಟೆವರೆಗೆ ನಡೆಯುತ್ತದೆ. ಪುಣ್ಯಾಹಃ-ಶುದ್ಧಿ ಮಾಡುವುದು ಎಲ್ಲಾ ವಿಧಿಗಳಿಗೆ ಮುಂಚೆ ಶುದ್ಧಕಾರ್ಯಗಳನ್ನು ಮಾಡಿ, ಹೋಮ, ರುದ್ರ ಹೋಮಗಳನ್ನು ದೇವಸ್ಥಾನದ ಎದುರಿನಲ್ಲಿ ನಡೆಸಲಾಗುತ್ತದೆ. ಇಲ್ಲಿ ದೇವಸ್ಥಾನದ ಹೊರಗಡೆ ಇರುವ ಧ್ವಜಸ್ಥಂಭಕ್ಕೆ ಧ್ವಜಾರೋಹಣ ಮಾಡಿ ದೇವರ ಆಲಗೆಯನ್ನು ಕಟ್ಟಿ ಜೊತೆಗೆ ಹೊಂಬಾಳೆಯಲ್ಲಿರುವ 4 ತೆಂಗಿನಕಾಯಿಗಳನ್ನು ಅದಕ್ಕೆ ಕಟ್ಟುತ್ತಾರೆ. ನಂತರ ಇಲ್ಲಿ ಬಲಿ ರೂಪದಲ್ಲಿ ಅನ್ನ ಬಲಿಕೊಟ್ಟು ತೀರ್ಥ ಪ್ರಸಾದ ವಿನಿಯೋಗ ಮಾಡುತ್ತಾರೆ
ಈ ಎಲ್ಲಾ ಕಾರ್ಯಗಳನ್ನು ನಡೆಸಲು ಬೇಕಾಗುವ ಖರ್ಚುಗಳನ್ನು ಒಬ್ಬರು ಭಕ್ತಾದಿಗಳು ವಹಿಸಿಕೊಂಡಿರುತ್ತಾರೆ.
ಎರಡನೇ ದಿನ ಬಸವ ವಾಹನ, ಸಂಜೆ 7.00 ಗಂಟೆಗೆ ಮರದಲ್ಲಿ ಮಾಡಿರುವಂತಹ ಬಸವನಿಗೆ ಅಲಂಕಾರ ಮಾಡಿ ಅದರ ಮೇಲೆ ಉತ್ಸವ ಮೂರ್ತಿಯಾದ ಶ್ರೀ ಚನ್ನಬಸವೇಶ್ವರ ಸ್ವಾಮಿಗಳನ್ನು ಕೂರಿಸಿ, ಅದರ ಸಮೇತ ಟ್ರಾಕ್ಟರ್ ನಲ್ಲಿ ಅಲಂಕರಿಸಿದ ಮಂಟಪದಲ್ಲಿ ಕೂರಿಸಿ ದೇವಸ್ಥಾನದ ದ್ವಾರದಲ್ಲಿರುವ ಬೋರೆಗೌಡರ ಸಮಾಧಿ(ಇವರು ಶ್ರೀ ಚನ್ನಬಸವೇಶ್ವರರ ಪರಮ ಭಕ್ತರು)ಯವರೆಗೆ ದಿಬ್ಬಣ ಹೊರಡುತ್ತದೆ ಮತ್ತು ಇಲ್ಲಿಂದ ಹಿಂತಿರುಗಿ ದೇವಸ್ಥಾನಕ್ಕೆ ಬರುತ್ತದೆ. ಹೀಗೆ ಬಂದು ಅಲಂಕೃತಗೊಂಡು ಹೋಗಿ ಬಂದು ಹೀಗೆ ರಾತ್ರಿ 10.30ರವರೆಗೆ ನಡೆಯುತ್ತದೆ. ಕೆಲವೊಮ್ಮೆ ಇನ್ನು ತಡವಾಗುತ್ತದೆ.
ಮೂರನೇ ದಿನ ವಿಶೇಷ ಪೂಜೆ “ನವರಂಗ ಪಲ್ಲಕ್ಕಿ” ಪಲ್ಲಕ್ಕಿಯನ್ನು ವಿವಿಧ ರಂಗುಗಳಲ್ಲಿ ಅಲಂಕರಿಸಿ ಅಂದರೆ ಹೂ, ಚಿತ್ತಾರಗಳಿಂದ ಅಲಂಕರಿಸಿ ಸಂಜೆ 7.00 ಗಂಟೆಗೆ ಸರಿಯಾಗಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಬೋರೆಗೌಡರ ಸಮಾಧಿಯವರೆಗೆ ಬೃಹತ್ ಜನಸ್ತೋಮದ ನಡುವೆ ಉತ್ಸವ ನಡೆಸುವುದು. ಮತ್ತೆ ಹಿಂತಿರುಗಿ ಬರುತ್ತಾರೆ. ಇದು ಒಬ್ಬ ಭಕ್ತನಿಂದ ಮಾತ್ರ ರಾತ್ರಿ 10.30 ಗಂಟೆಯವರೆಗೂ ನಡೆಯುತ್ತದೆ.
ನಾಲ್ಕನೇ ದಿನ “ಹುಲಿವಾಹನ” ಇಲ್ಲಿ ಒಂದು ಮರದ ಹುಲಿಯ ಸ್ತಂಭವಿದೆ. ಅದಕ್ಕೆ ವಿವಿಧ ಅಲಂಕಾರ ಮಾಡಿ ಅದರ ಮೇಲೆ ಉತ್ಸವ ಮೂರ್ತಿಯನ್ನು ಕೂರಿಸಿ ಉತ್ಸವ ಮಾಡುವುದು.
ಐದನೇ ದಿನ “ಉಪ್ಪರಿಗೆ ಸೇವೆ”. ರಥಬೀದಿಯಲ್ಲಿ ಅಂದರೆ ದೇವಸ್ಥಾನದ ಒಳಾಂಗಣದಲ್ಲಿ ಇರುವ ಬೀದಿಯಲ್ಲಿ ಪ್ರಾಚೀನ ಕಾಲದ ಉಪ್ಪರಿಗೆ ಇದೆ. ಅಲ್ಲಿ ಉಯ್ಯಾಲೆಯನ್ನು ಕಟ್ಟಿ ಉತ್ಸವ ಮೂರ್ತಿಯನ್ನು ಅಲ್ಲಿಗೆ ಪಲ್ಲಕ್ಕಿಯಲ್ಲಿ ತರುತ್ತಾರೆ. ಮತ್ತು ಉಯ್ಯಾಲೆ ಮೇಲೆ ಕೂರಿಸಿ ಉತ್ಸವ ಮೂರ್ತಿಯನ್ನು 3 ಬಾರಿ ತೂಗುತ್ತಾರೆ. ತದನಂತರ ಮೂರ್ತಿಯನ್ನು ರಥಕ್ಕೆ ತಂದು ವೈಭವದ ರಥವನ್ನು ರಾಜಬೀದಿಯನ್ನುಸಾವಿರಾರು ಜನ ಭಕ್ತರು ಒಯ್ಯುತ್ತಾರೆ. ರಥವನ್ನು ಎಳೆದು ಇದನ್ನು ಮತ್ತೆ ಹಿಂದಕ್ಕೆ ಎಳೆಯುತ್ತಾರೆ.ನಂತರ ಉಪ್ಪರಿಗೆಯವರೆಗೂ ತಂದು ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಇಟ್ಟುಕೊಂಡು ದೇವಸ್ಥಾನದ ಒಳಗೆ ಕೂರಿಸುತ್ತಾರೆ. ಇದೆಲ್ಲ ಮಧ್ಯಾಹ್ನ 12.00 ಗಂಟೆ ಸುಮಾರಿಗೆ ಪ್ರಾರಂಭಗೊಂಡು ಅಂದು ರಾತ್ರಿ 12.00 ಗಂಟೆ ಸುಮಾರಿಗೆ ಮುಗಿಯುತ್ತದೆ.
ರುದ್ರಾಕ್ಷಿ ಮಂಟಪ: ನೋಡಲು ರುದ್ರಾಕ್ಷಿಯ ಜೋಡಣೆಯಲ್ಲಿ ಮಾಡಿರುವ ಮಂಟಪದಂತೆ ಇರುವ ಚಿಕ್ಕ ಮಂಟಪ ಇಟ್ಟು ಅದಕ್ಕೆ ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ, ಉತ್ಸವ ಮೂರ್ತಿಯನ್ನು ಮಂಟಪದಲ್ಲಿ ಕೂರಿಸಿ, ಮಂಟಪವನ್ನು ದೇವಸ್ಥಾನದ ಮುಖ್ಯದ್ವಾರದಲ್ಲಿ ಇರುವ ಬೋರೇಗೌಡರ ಸಮಾಧಿವರೆಗೂ ಎಳೆದು ಹಿಂದಕ್ಕೆ ಎಳೆಯುತ್ತಾರೆ.
ವಿಚಿತ್ರ ಮಂಟಪ: ನೋಡಲು ವಿಚಿತ್ರ ರೀತಿಯಲ್ಲಿ ಇರುವ ಮಂಟಪದಲ್ಲಿ ಅಲಂಕಾರ ಮಾಡಿ ಕೂರಿಸಿ ಮಂಟಪವನ್ನು ಬೋರೇಗೌಡರ ಸಮಾಧಿವರೆಗೂ ಎಳೆದು ಮತ್ತೆ ಹಿಂದಕ್ಕೆ ಎಳೆಯುವುದು ಉತ್ಸವ ಮೂರ್ತಿಯನ್ನು ತಂದು ದೇವಸ್ಥಾನದಲ್ಲಿನ ಕೂರಿಸುತ್ತಾರೆ. ಇವೆಲ್ಲ ಸಂಜೆ 7.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೂ ನಡೆಯುತ್ತದೆ.
ಏಳನೇ ದಿನ “ಬಿಳಿಕುದುರೆ ವಾಹನ” ಬಿಳಿ ಕುದುರೆಯಂತೆ ಇರುವ ಮರದಲ್ಲಿ ಕೆತ್ತಿರುವ ಒಂದು ವಿಗ್ರಹ ಇದೆ. ಅದಕ್ಕೆ ಎಲ್ಲಾ ತರಹದ ಅಲಂಕಾರ ಮಾಡಿ ದೇವರನ್ನು ಅದರ ಮೇಲೆ ಕೂರಿಸಿ ಅದನ್ನು ಬೋರೇಗೌಡರ ಸಮಾಧಿಯವರೆಗೆ ಉತ್ಸವ ನಡೆಸಿ ಹಿಂತಿರುಗಿ ಬರುತ್ತಾರೆ. ಇದು ಸಂಜೆ 7.00 ಗಂಟೆಯಿಂದ ರಾತ್ರಿ ಗಂಟೆಯವರೆಗೆ ನಡೆಯುತ್ತದೆ.
ಒಂಭತ್ತನೇ ದಿನ “ಪಲ್ಲಕ್ಕಿ ಉತ್ಸವ”. ಪಲ್ಲಕ್ಕಿಯನ್ನು ತುಂಬ ಸುಂದರವಾದ ಅಲಂಕಾರ ಮಾಡಿ, ಮಧ್ಯಾಹ್ನ 12.00 ಗಂಟೆ ಸುಮಾರಿಗೆ ದೇವರನ್ನು ಪಲ್ಲಕ್ಕಿಯಲ್ಲಿ ಕೂರಿಸಿ ಜೊತೆಗೆ ಇನ್ನೊಂದು ಪಲ್ಲಕ್ಕಿಯನ್ನು ಅಲಂಕರಿಸಿ ಅದರಲ್ಲಿ ಶ್ರಿ ಮಲ್ಲಿಕಾರ್ಜುನ ಸ್ವಾಮಿ ಮತ್ತು ಭ್ರಮರಾಂಭ ದೇವಿಯವರನ್ನು ಕೂರಿಸಿ ಎರಡು ಪಲ್ಲಕ್ಕಿಗಳು ಊರಿನ ಪ್ರಮುಖ ಬೀದಿಗಳಲ್ಲಿ ಹೊರಟು ಹೋಗುತ್ತದೆ ಜನಗಳು ಅವರ ಮನೆ ಎದುರು ಬಂದಾಗ ಪೂಜೆ ನೆರವೇರಿಸಿಕೊಳ್ಳುತ್ತಾರೆ. ಹೀಗೆ ಸಂಜೆ 5.00 ರಿಂದ 6.00 ಗಂಟೆ ಸುಮಾರಿಗೆ ವಾಪಸ್ಸು ದೇವಸ್ಥಾನಕ್ಕೆ ಕರೆತರುತ್ತಾರೆ.
ಕೆಂಪು ಕುದುರೆವಾಹನ, ನವಿಲಿನ ವಾಹನ, ಗಜವಾಹನ, ನಂದಿವಾಹನ ಹೀಗೆ ವಿವಿಧ ವಾಹನಗಳನ್ನು ಅಲಂಕರಿಸಿ ಅದರಲ್ಲಿ ಉತ್ಸವ ಮೂರ್ತಿಯನ್ನು ಕೂರಿಸಿ ಉತ್ಸವ ನೆರವೇರಿಸುತ್ತಾರೆ. ದಿನ ಸಂಜೆ 6.30ರಿಂದ 12.00 ಗಂಟೆಯವರೆಗೂ ನಡೆಯುತ್ತದೆ. ಈ ಜಾತ್ರೆ ನಡೆಯುವಾಗ 20-25 ದಿನಗಳ ಕಾಲ ಉತ್ಸವ ಮೂರ್ತಿಗಳನ್ನು ಚಿಕ್ಕ ದೇವಸ್ಥಾನದಿಂದ ತಂದು ಇಲ್ಲಿಯೇ ಇರಿಸಿಕೊಳ್ಳಲಾಗುತ್ತದೆ.
ಈ ಸಮಯದಲ್ಲಿ ಬೆಳಗಿನ ವೇಳೆಯಲ್ಲಿ ದೇವರಿಗೆ ಭಕ್ತಾದಿಗಳಿಂದ ವಿವಿಧ ಅಭಿಷೇಕಗಳು ನಡೆಯುತ್ತವೆ. ರುದ್ರಾಭಿಷೇಕ, ಏಕರುದ್ರಾಭಿಷೇಕ ಇತ್ಯಾದಿ.
15 ದಿನಗಳು ಭಕ್ತರು ಈ ಎಲ್ಲಾ ಕಾರ್ಯಕ್ರಮಗಳನ್ನು ಅವರ ಸ್ವಂತ ಖರ್ಚಿನಲ್ಲಿ ನಡೆಸಲು ನೆರವಾಗುತ್ತಾರೆ. ಯಾವ ಭಕ್ತರಿಂದ ಯಾವ ಸೇವೆ ಯಾವ ದಿನ ನಡೆಯುತ್ತದೆ ಎಂದು ಈ ಮೊದಲೇ ಭಕ್ತಾದಿಗಳಿಗೆ ತಿಳಿಸಲಾಗಿರುತ್ತದೆ. ಅಂತೆಯೆ ಅವರು ಆ ದಿನ ಅಲ್ಲಿ ಬಂದು ಪೂಜೆ ನೆರವೇರಿಸಿಕೊಳ್ಳಬಹುದು.
15ನೇ ದಿನ ಕೊನೆಯ ದಿನ ತಪೋತ್ಸವ ನಡೆಸುತ್ತಾರೆ. ದೇವರನ್ನು ತೆಪ್ಪದಲ್ಲಿ ಕಟ್ಟಿ ಅಲ್ಲಿ ಉತ್ಸವ ಮಾಡುತ್ತಾರೆ.
ಪ್ರತಿಯೊಂದು ಉತ್ಸವವು ಜನಗಳಿಂದ ತುಂಬಿದ್ದು ವಾದ್ಯಗಳು, ಸಿಡಿಮದ್ದುಗಳಿಂದ ವಿಜೃಂಭಣೆಯಿಂದ ನಡೆಸಲಾಗುತ್ತದೆ.
4-5 ದಿನಗಳ ನಂತರ ಗುಬ್ಬಿಯಿಂದ 3 ಕಿ.ಮೀ ದೂರದಲ್ಲಿರುವ ಚನ್ನಶೆಟ್ಟಿಹಳ್ಳಿ ಗದ್ದಿಗೆಗೆ (ಶ್ರೀ ಚನ್ನಬಸವೇಶ್ವರರು ಈ ಗದ್ದುಗೆಯಲ್ಲಿ ಕುಳಿತು ತಪಸ್ಸು ಮಾಡಿದ್ದರು ಎಂದು ಪ್ರತೀತಿ) ತೆಗೆದುಕೊಂಡು ಹೋಗಿ ಈ ಊರಿನಲ್ಲಿ ಉತ್ಸವ ಮಾಡಿ ನಂತರ ದೇವಸ್ಥಾನಕ್ಕೆ ವಾಪಸ್ಸು ತೆಗೆದುಕೊಂಡು ಬರುತ್ತಾರೆ.
ದನಗಳ ಜಾತ್ರೆ ಇದೇ 15 ದಿನಗಳಲ್ಲಿ ನಡೆಯುತ್ತದೆ. ಬೇರೆ ಬೇರೆ ಊರುಗಳಿಂದ ಬಂದ ಜನಗಳು ದನಗಳ ವ್ಯಾಪಾರ ಮಾಡಿಕೊಳ್ಳುತ್ತಾರೆ.(ಸುತ್ತ ಮುತ್ತಲ ಊರುಗಳಿಂದ) ಉಳಿದಂತೆ ಎಲ್ಲಾ ಅಮಾವಾಸ್ಯೆ ಮತ್ತು ಹುಣ್ಣಿಮೆಗಳ ದಿನದಂದು ಚಿಕ್ಕ ದೇವಸ್ಥಾನದಿಂದ ಉತ್ಸವ ಮೂರ್ತಿಯನ್ನು ದೊಡ್ಡ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ಕಟ್ಟುತ್ತಾರೆ. ಬೆಳಗ್ಗೆ 8.30 ರಿಂದ 9.00 ಗಂಟೆಗೆ ಹೊರಟು 10.00 ಗಂಟೆಗೆ ಸುಮಾರಿಗೆ ತಲುಪುತ್ತದೆ. 11.00 ರಿಂದ 12.00 ಗಂಟೆ ದೊಡ್ಡ ದೇವಸ್ಥಾನದಲ್ಲಿ ಉತ್ಸವ ಮೂರ್ತಿಗೆ ವಿವಿಧ ಅಭಿಷೇಕಗಳು ಮತ್ತು ಪೂಜೆಗಳನ್ನು ಮಾಡಲಾಗುತ್ತದೆ. ಮತ್ತೆ ಸಂಜೆ ಪಲ್ಲಕ್ಕಿ ಹೊರಟು ರಾತ್ರಿ 9.30 ಸುಮಾರಿಗೆ ಚಿಕ್ಕ ದೇವಸ್ಥಾನ ತಲುಪುತ್ತದೆ. ಮತ್ತೆ ಉತ್ಸವ ಮೂರ್ತಿಗಳಿಗೆ ವಿಧಿವತ್ತಾದ ಪೂಜೆಗಳು, ರಾಜೋಪಚಾರ ಮಾಡಿ ದೇವರಿಗೆ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗ ಆಗುತ್ತದೆ.
ಕಾರ್ತಿಕ ಮಾಸ ಪೂಜೆ:
20-25 ದಿನಗಳವರೆಗೆ ಉತ್ಸವ ನಡೆಯುತ್ತದೆ.ಈ ಸಮಯದಲ್ಲಿ ಉತ್ಸವ ಮೂರ್ತಿಗಳು ದೊಡ್ಡ ದೇವಸ್ಥಾನದಲ್ಲೇ ಇರುತ್ತದೆ. ಪ್ರತಿದಿನ ಉತ್ಸವ ನಡೆಯುತ್ತದೆ. ಈ ಉತ್ಸವಗಳು ನಡೆಯುವಾಗ ನಂದಿಧ್ವಜ ಕುಣಿತ, ಕರಡಿ ವಾದ್ಯ, ಲಿಂಗವೀರರ ಕುಣಿತ, ಬಿರುಸು ಬಾಣಗಳ ವಿವಿಧ ವಿನೋದವಳಿಗಳು, ಸಂಜೆ ಕೆಲವು ಗಾಯನಗಳು, ಕೀರ್ತನೆಗಳು, ಹರಿಕಥೆಗಳು ನಡೆಯುತ್ತದೆ. ಪ್ರತಿದಿನ ಬಸವ ವಾಹನ, ನವಗ್ರಹ ಪಲ್ಲಕ್ಕಿ, ಹುಲಿವಾಹನ, ರುದ್ರಾಕ್ಷಿ ಮಂಟಪೋತ್ಸವ ಮತ್ತು ಇತ್ಯಾದಿಗಳು ನಡೆಯುತ್ತದೆ. 29ನೇ ದಿನ ರಾತ್ರಿ ಹೂವಿನ ವಾಹನೋತ್ಸವ ಬಂಗ್ಲಿಮರದ ಹತ್ತಿರ ಹೋಗಿ ಹಿಂತಿರುಗುತ್ತಾರೆ. ದೇವರು ಬೀದಿಯಲ್ಲಿ ಹೋಗುವಾಗ ಪ್ರತಿಯೊಬ್ಬರು ತಮ್ಮ ಮನೆಗಳ ಮುಂದೆ ಬಾಳೆಕಂಬ ನಿಲ್ಲಿಸಿ ಕಡಿಯುತ್ತಾರೆ. ನಂತರ ಪಾನಕ ಪ್ರಸಾದ ವಿನಿಯೋಗವಾಗುತ್ತದೆ.
ಶ್ರಾವಣ ಮಾಸ:
ಪೂರ್ತಿ ಒಂದು ತಿಂಗಳು ಉತ್ಸವ ಮೂರ್ತಿಯನ್ನು ಚಿಕ್ಕ ದೇವಸ್ಥಾನದಿಂದ ದೊಡ್ಡ ದೇವಸ್ಥಾನಕ್ಕೆ ಪಲ್ಲಕ್ಕಿಯಲ್ಲಿ ತಂದು ದೊಡ್ಡ ದೇವಸ್ಥಾನದಲ್ಲಿ ರುದ್ರಾಭಿಷೇಕ ಮತ್ತಿತ್ತರ ಅಲಂಕಾರ ಮತ್ತು ಪೂಜೆ ವಿಧಿಗಳನ್ನು ನೆರೆವೇರಿಸುತ್ತಾರೆ. ಮತ್ತೆ ಚಿಕ್ಕ ದೇವಸ್ಥಾನಕ್ಕೆ ತೆಗೆದುಕೊಂಡು ಹೋಗುತ್ತಾರೆ. ಸಂಜೆ ಹೊತ್ತಿಗೆ ಚಿಕ್ಕ ದೇವಸ್ಥಾನದಲ್ಲಿನ ಕೂರಿಸಿ ರಾಜೋಪಚಾರಗಳನ್ನು ನೆರವೇರಿಸುತ್ತಾರೆ.